Wednesday 24 June 2015

ಫಾರ್ಮ್ ಟೂರಿಸಂ ಅಂದರೇನು?

ಬಹಳಷ್ಟು ಜನರಿಗೆ ಈ ವಿಷಯದಲ್ಲಿ ಮಾಹಿತಿ ಇಲ್ಲ. ಫಾರ್ಮ್ ಟೂರಿಸಂ ಪ್ರಾರಂಭಿಸುವ ವಿಷಯ ಪ್ರಸ್ತಾಪ ಮಾಡಿದಾಗ "ಓ, ರೆಸಾರ್ಟ್ ಮಾಡ್ತೀರಾ?" ಅನ್ನುವ ಉದ್ಗಾರ ಸಾಮಾನ್ಯ. ರೆಸಾರ್ಟ್ ಮಾಡುವ ಉದ್ದೇಶ ಖಂಡಿತಾ ನಮ್ಮಲ್ಲಿಲ್ಲವೆಂದಾಗ ಒಂಥರಾ ವಿಚಿತ್ರ ಪ್ರತಿಕ್ರಿಯೆ ಬಂದೇ ಬರುತ್ತದೆ. ಹಾಗಾದರೆ ಫಾರ್ಮ್ ಟೂರಿಸಂನಲ್ಲಿ ಏನಿದೆ?
- ತೋಟದ ನೈಸರ್ಗಿಕ ವಾತಾವರಣದಲ್ಲಿ, ಯಾವುದೇ ಕೃತ್ರಿಮವಿಲ್ಲದ ಹಸಿರಿನ ನಡುವೆ, ಶುದ್ಧ ಗಾಳಿಯಲ್ಲಿ ಓಡಾಟ.
- ಸುತ್ತಲಿನ ಪರಿಸರವನ್ನು ವೀಕ್ಷಿಸಿ ಅನುಭವಿಸುವುದು
- ಪ್ರಕೃತಿಯ ಅಚ್ಚರಿಗಳಾದ ಹೂಗಳು , ಮರಗಿಡಗಳು, ಪ್ರಾಣಿ-ಪಕ್ಷಿಗಳು , ಚಿಟ್ಟೆಗಳು, ಕ್ರಿಮಿಕೀಟಗಳು - ಇವೆಲ್ಲವುಗಳ ಸೂಕ್ಷ್ಮ ಅವಲೊಕನ.
- ಕಾಲಕ್ಕನುಗುಣವಾಗಿ ಬೆಳೆದ ತೋಟದ ಬೆಳೆಗಳ - ಹಣ್ಣು, ತರಕಾರಿಗಳು - ಇವುಗಳನ್ನು ಗಿಡದಿಂದ ಕಿತ್ತು ತಿನ್ನುವ ವಿಶಿಷ್ಟ ಸಂತೋಷ .
- ಹಸು, ಕುರಿ, ಕೋಳಿಗಳಿಗೆ ನಮ್ಮ ಕೈಯಾರೆ ಆಹಾರ ತಿನ್ನಿಸುವ ಭಾಗ್ಯ.
- ತೋಟದ ನಿರ್ವಹಣೆಗೆ ಮಾಡಬೇಕಾದ ಕೆಲಸ ಕಾರ್ಯಗಳನ್ನು ತಿಳಿದುಕೊಳ್ಳುವ ಪ್ರಯತ್ನ
- ಬೆಳೆ ಬೆಳೆಯುವ ಕ್ರಮಗಳ ಕಡೆ ಗಮನ
- ಹಳ್ಳಿಯ, ರೈತರ, ಕೃಷಿ ಕಾರ್ಮಿಕರ ಜೀವನ ಪದ್ಧತಿಯ ಒಂದು ಝಲಕ್.
- ನಿಸರ್ಗದ ಮಧ್ಯೆ ಒಂದಿಷ್ಟು ಪಾಠ - ಆಟೋಟಗಳೊಂದಿಗೆ ಮತ್ತು ಸ್ವಲ್ಪ ಕೈ ಕೆಸರು  ಮಾಡಿಕೊಂಡು!
- ಎಲ್ಲಕ್ಕೂ ಮುಖ್ಯವಾಗಿ ನಾವು ದಿನನಿತ್ಯ ತಿಂದುಣ್ಣುವ ಆಹಾರ ಪದಾರ್ಥಗಳು ಎಲ್ಲಿಂದ, ಹೇಗೆ ಬರುತ್ತವೆಂದು ತಿಳಿದುಕೊಳ್ಳುವ ಸಂಭ್ರಮ .

ರೆಸಾರ್ಟ್ ಗಳಲ್ಲಿ ಇಂಥ ಅನುಭವ ಅದ್ಹೇಗೆ ಸಾಧ್ಯ?

ಇಂದಿನ ಪೇಟೆಯ ಮಕ್ಕಳು ಕಂಡು ಕೇಳರಿಯದ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳುವ ಸದವಕಾಶ ಫಾರ್ಮ್ ಟೂರಿಸಂನಲ್ಲಿ ಲಭ್ಯ. ನಾವು ಕುಡಿಯುವ ಹಾಲು ನಂದಿನಿ ಪ್ಯಾಕೆಟ್ ಗೆ ಹೇಗೆ ಬರುತ್ತದೆ, ಸ್ನಾನ ಮಾಡುವ ಸಾಬೂನಿಗೆ ಪರಿಮಳ ಎಲ್ಲಿಂದ ಬಂತು, ಬಾಳೆಗಿಡ ಎಷ್ಟು ಗೊನೆ ಬಿಡುತ್ತದೆ, ರಸಗೊಬ್ಬರಗಳಿಂದ ನಮ್ಮ ಆಹಾರದ, ಆರೋಗ್ಯದ  ಮೇಲಾಗುವ ಪರಿಣಾಮಗಳೇನು , ಇಂಥ ಹತ್ತು-ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿ ಲಭ್ಯ - ಪ್ರಮಾಣ ಸಹಿತ!


1 comment: